ಆಂಟೆರಿಯೊ
ಸಿಹಿ ನೀರಿನ ಸರೋವರ. ಉತ್ತರ ಅಮೆರಿಕ ಖಂಡದಲ್ಲಿದೆ. ಮೊದಲು ಕಂಡವ ಎಟಿನೆ ಬ್ರೂಲ್ (1615). ಪಂಚಮಹಾ ಸರೋವರಗಳಲ್ಲೊಂದು. ಅತ್ಯಂತ ಚಿಕ್ಕದಾದರೂ ಆಳದಲ್ಲಿ 3 ನೆಯ ಸ್ಥಾನ ಪಡೆದಿದೆ. 193 ಮೈಲಿ ಉದ್ದ ಮತ್ತು 53 ಮೈಲಿ ಅಗಲವಾಗಿದೆ. ವಿಸ್ತೀರ್ಣ 7520 ಚ.ಮೈ. ಸಮುದ್ರಮಟ್ಟದಿಂದ 246' ಅಡಿ ಎತ್ತರದಲ್ಲಿದೆ. ಅತ್ಯಂತ ಆಳವಾದ ಭಾಗ 778' ಅಂದರೆ ಸಮುದ್ರಮಟ್ಟಕ್ಕಿಂತ 532' ಆಳ. ಜಲಾನಯನ ಕ್ಷೇತ್ರ ಸುಮಾರು 34,800 ಚ.ಮೈ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಾಸರಿ 30' ಮಳೆಯಾಗುವುದು.

ಆಂಟೆರಿಯೊ ಸರೋವರದ ನ್ಯೂಯಾರ್ಕ್ ಮತ್ತು ಆಂಟೆರಿಯೊ ಪ್ರಾಂತ್ಯಗಳ ಮಧ್ಯೆ ಇದೆ. ಉತ್ತರಕ್ಕೆ ಹೋದಂತೆಲ್ಲ ಎತ್ತರ ಹೆಚ್ಚಾಗಿ ಮೈದಾನ ವಿಶಾಲವಾಗುತ್ತದೆ. ದಕ್ಷಿಣದಲ್ಲಿ ಸುಮಾರು 8 ಮೈಲಿ ದೂರದಲ್ಲಿ ನಯಾಗರ ಗುಡ್ಡವಿದೆ. ಈ ಮಧ್ಯ ಭಾಗದಲ್ಲಿ ವಿಶೇಷವಾಗಿ ಹಣ್ಣು ಬೆಳೆಯುತ್ತಾರೆ. ಈ ಸರೋವರಕ್ಕೆ ನಯಾಗರ, ಜಿನಿಸೀ, ಆಸ್‍ವಿಗೊ, ಬ್ಲಾಕ್ ಮತ್ತು ಟ್ರೆಂಟ್ ಎಂಬ ನದಿಗಳು ಬಂದು ಸೇರುತ್ತವೆ. ಈರಿ ಮತ್ತು ಆಂಟೆರಿಯೊ ಸರೋವರಗಳನ್ನು 27ಮೈ. ಉದ್ದವಿರುವ ವೆಲ್‍ಲ್ಯಾಂಡ್ ಕಾಲುವೆ ಸೇರಿಸಿದೆ. ಸರೋವರಕ್ಕೂ ಸೇಂಟ್ ಲಾರೆನ್ಸ್ ನದಿಗೂ ಸಂಪರ್ಕವಿರುವುದರಿಂದ ಹೆಚ್ಚಾಗಿ ಬಂದ ನೀರು ಆ ನದಿಯ ಮೂಲಕ ಹಾದು ಅಟ್ಲಾಂಟಿಕ್ ಸಾಗರವನ್ನು ಸೇರುತ್ತದೆ. 

ಈ ಸರೋವರದಲ್ಲಿ ದ್ವೀಪಗಳಿಲ್ಲ. ಸರೋವರದ ನೀರು ಚಳಿಗಾಲದಲ್ಲಿ ಹೆಪ್ಪುಗಟ್ಟುವುದಿಲ್ಲವಾದರೂ ದಡದಲ್ಲಿರುವ ರೇವುಪಟ್ಟಣಗಳಲ್ಲಿ ಹೆಪ್ಪುಗಟ್ಟುತ್ತದೆ. ಇದರ ದಡದಲ್ಲಿರುವ ಮುಖ್ಯವಾದ ರೇವುಪಟ್ಟಣಗಳು : ಕಿಂಗಸ್ಟನ್, ಟೊರಾಂಟೊ, ಹ್ಯಾಮಿಲ್‍ಟನ್. ಜಲಮಾರ್ಗದಿಂದ ವಸ್ತುಸಾಗಾಣಿಕೆ ಅಷ್ಟು ಹೆಚ್ಚಾಗಿಲ್ಲ. ಕಲ್ಲಿದ್ದಲನ್ನು ಹೆಚ್ಚಾಗಿ ಸಾಗಿಸುವರು.
(ಎಸ್.ಎನ್.)

ಆಂಟೆರಿಯೋ

ಕೆನಡದ ಒಂದು ಮುಖ್ಯ ಪ್ರಾಂತ್ಯ. ವಿಸ್ತೀರ್ಣದಲ್ಲಿ ಎರಡನೆಯದು. 420 -570 ಉತ್ತರ ಅಕ್ಷಾಂಶ 700 30' ಯಿಂದ 950 ಪಶ್ಚಿಮ ರೇಖಾಂಶ ವಿಸ್ತೀರ್ಣ 412,582 ಚ.ಮೈ. ದಕ್ಷಿಣೋತ್ತರದ ಉದ್ದ ಸುಮಾರು 1050 ಮೈ. ಪೂರ್ವ ಪಶ್ಚಿಮದ ಅಗಲ ಸುಮಾರು 1000 ಮೈ. ಪೂರ್ವದಲ್ಲಿ ಕ್ವಿಬೆಕ್, ಪಶ್ಚಿಮದಲ್ಲಿ ಮೆನಿಟೊಬಾ, ದಕ್ಷಿಣದಲ್ಲಿ ನ್ಯೂಯಾರ್ಕ್ ಓಹಿಯೋ ಮತ್ತು ಮಿಚಿಗನ್, ಉತ್ತರದಲ್ಲಿ ಹಡ್‍ಸನ್ ಮತ್ತು ಜೇಮ್ಸ್ ಕೊಲ್ಲಿಗಳಿವೆ. ಸ್ವಾಭಾವಿಕ ಸಸ್ಯವರ್ಗ ಚೆನ್ನಾಗಿದ್ದು ವನ್ಯ ಸಂಪತ್ತು ಹೇರಳವಾಗಿದೆ. ವ್ಯವಸಾಯ ತುಂಬ ಪ್ರಗತಿಯನ್ನು ಹೊಂದಿದೆ.

ಚಿನ್ನ, ನಿಕ್ಕಲ್, ತಾಮ್ರ, ಕಬ್ಬಿಣ, ಕೊಬಾಲ್ಟ್, ಯುರೇನಿಯಂ, ಬೆಳ್ಳಿ, ಪೆಟ್ರೋಲಿಯಂ, ಗಂಧಕ ಮುಂತಾದ ಖನಿಜಗಳು ಹೇರಳವಾಗಿ ದೊರೆಯುವುದರಿಂದ ಈ ಪ್ರಾಂತ್ಯ ಕೈಗಾರಿಕೆಯಲ್ಲಿ ತುಂಬ ಪ್ರಗತಿಯನ್ನು ಹೊಂದಿದೆ. ಇಲ್ಲಿನ ಸಂಚಾರ ಮಾರ್ಗದ ವ್ಯವಸ್ಥೆ ಉತ್ತಮವಾಗಿದೆ.										
(ಪಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ